ಬೇಕನ್, ರೇ ಸ್ಟ್ಯಾನರ್ಡ್	
1870-1946. ಅಮೆರಿಕನ್ ಜೀವನ ಚರಿತ್ರಕಾರ. ಕಾವ್ಯನಾಮ ಡೇವಿಡ್ ಗ್ರೇಸನ್. ಹುಟ್ಟಿದ್ದು ಮಿಚಿಗನ್‍ನ ಲ್ಯಾನ್ಸಿಂಗ್ ಎಂಬಲ್ಲಿ. ಮಿಚಿಗನ್ ಕೃಷಿ ಕಾಲೇಜಿನ ಪದವೀಧರ (1889). ಅನಂತರ ಕಾನೂನು ಮತ್ತು ಸಾಹಿತ್ಯ ವಿಷಯಗಳನ್ನು ತೆಗೆದುಕೊಂಡು ವ್ಯಾಸಂಗ ಮಾಡಿದ. ಬರಹದ ಕಡೆ ಒಲವು ಹೆಚ್ಚಾಗಿ ವ್ಯಾಸಂಗ ತೊರೆದು 1892ರಲ್ಲಿ ಷಿಕಾಗೊ ರೆಕಾರ್ಡ್ ಪತ್ರಿಕೆಗೆ ವರದಿಗಾರನಾದ. ಔಟ್‍ಲುಕ್ ಮತ್ತು ಮ್ಯಾಕ್ಲೂರ್ ಮಾಸ ಪತ್ರಿಕೆಗಳಿಗೂ ಲೇಖನ ಬರೆಯುತ್ತಿದ್ದ. 1898ರಲ್ಲಿ ಮ್ಯಾಕ್ಲೂರ್ ಬಳಗಕ್ಕೆ ಸೇರಿದ. 

	ಡೇವಿಡ್ ಗ್ರೇಸಸ್ ಎಂಬ ಕಾವ್ಯನಾಮದಲ್ಲಿ ಬರೆದ ಆಡ್ವೆಂಚರ್ಸ್ ಇನ್ ಕಂಟೆಂಟ್‍ಮೆಂಟ್ ಈತನ ಮೊದಲ ಪುಸ್ತಕ (1907). ಮೋಹಕ ಶೈಲಿಯ ಈ ಸಂಕಲನ (ಲಲಿತ ಪ್ರಬಂಧಗಳು) ಹೊಸಬಗೆಯ ಬರೆಹವೆನಿಸಿ ಜನಪ್ರಿಯವಾಯಿತು. 1910ರಲ್ಲಿ ಮೆಸ್ಸಾಚುಸೆಟ್ಸ್‍ನ ಆಮ್ಹಸ್ರ್ಟ್‍ಗೆ ಸಂಸಾರ ಸಮೇತ ಹೋಗಿ ನೆಲಸಿ ಜೀವಮಾನ ಪೂರ್ತಿ ಅಲ್ಲಿ ಇದ್ದ. ಪತ್ರಿಕೋದ್ಯಮಿಯಾಗಿ ದೇಶ ವಿದೇಶ ಸಂಚಾರ ಮಾಡಿದ ಈತ ಆಧ್ಯಕ್ಷ ವುಡ್ ರೊ ವಿಲ್ಸನ್‍ನ ಜೀವನ ಚರಿತ್ರೆಗೆ ಸಂಬಂಧಿಸಿದಂತೆ ವುಡ್ ರೊ ವಿಲ್ಸನ್-ಲೈಫ್ ಅಂಡ್ ಲೆಟರ್ಸ್ (8 ಸಂಪುಟಗಳು) ಎಂಬ ಕೃತಿಯನ್ನು ರಚಿಸಿದ. ಇದಕ್ಕೆ ಪುಲಿಟ್ಜರ್ ಬಹುಮಾನ ಬಂದಿತು. ಅಮೆರಿಕ ಪ್ರೆಸ್ ಬ್ಯೂರೋದ ನಿರ್ದೇಶಕನಾಗಿದ್ದ ಈತ 1919ರಲ್ಲಿ ಅಧ್ಯಕ್ಷ ವಿಲ್ಸನ್‍ರ ಆದೇಶದ ಮೇರೆಗೆ ಪ್ಯಾರಿಸ್ ಶಾಂತಿ ಸಮ್ಮೇಳನದಲ್ಲಿ ಭಾಗವಹಿಸಿ ವುಡ್‍ರೋ ವಿಲ್ಸನ್ ಅಂಡ್ ವಲ್ರ್ಡ್ ಸೆಟ್ಲ್‍ಮೆಂಟ್-ಎ ಹಿಸ್ಟರಿ ಆಫ್ ದಿ ಪೀಸ್ ಕಾನ್ಫರನ್ಸ್ (1922) ಎಂಬ ವರದಿರೂಪಕ ಪುಸ್ತಕ ಬರೆದ. ನೇಟಿವ್ ಅಮೆರಿಕನ್ (1941), ಅಂಡರ್ ಮೈ ಎಲ್ಮ್ (1942), ಅಮೆರಿಕನ್ ಕ್ರಾನಿಕಲ್ (1945)-ಇವು ಈತನ ಆತ್ಮಕಥನಕ್ಕೆ ಸಂಬಂಧಿಸಿದ ಕೃತಿಗಳು. ಸೀನ್ ಇನ್ ಜರ್ಮನಿ (1901), ದಿ ಸ್ಪಿರಿಚ್ಯುಯಲ್ ಅನ್ ರೆಸ್ಟ್ (1910), ಅಡ್ವೆಂಚರ್ಸ್ ಸರಣಿಯಲ್ಲಿ-ಇನ್ ಕಂಟೆಂಟ್ಮೆಂಟ್ ಅನಂತರ ಇನ್ ಫ್ರೆಂಡ್‍ಷಿಪ್ (1910), ಇನ್ ಅಂಡರ್‍ಸ್ಟಾಂಡ್ಯಿಂಗ್ (1925), ಇನ್ ಸಾಲಿಟ್ಯೂಡ್ (1931)-ಇವು ಈತನ ಇತರ ಕೃತಿಗಳು. ಇವನ ಬರೆಹದ ಶೈಲಿಯನ್ನೂ ವಿಚಾರ ಸರಣಿಯನ್ನೂ ಮೆಚ್ಚಿ ಸಾವಿರಾರು ಓದಗರು ಬರೆದ ಪತ್ರಗಳ ಸಂಗ್ರಹವೂ ಇದೆ. 								
(ಕೆ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ